ಕೆಲವೆಡೆ ಶಾಲೆಗಳಿಗೆ ರಜೆ
ಬೆಂಗಳೂರು: ದೇಶದ ಎಲ್ಲ ಪ್ರಮುಖ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರದಿಂದ 48 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯದಲ್ಲೂ ಜನಜೀವನ ಅಸ್ತವ್ಯಸ್ತಗೊಳ್ಳುವ ಸಂಭವ ಹೆಚ್ಚಾಗಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ ಆಟೊ ಚಾಲಕರು ಈ ಪ್ರತಿಭಟನೆಗೆ ಕೈಜೋಡಿಸಲು ತೀರ್ಮಾನಿಸಿದ ಕಾರಣ ಎಲ್ಲ ವರ್ಗಕ್ಕೂ ಮುಷ್ಕರದ ಬಿಸಿ ತಟ್ಟಲಿದೆ. ಬ್ಯಾಂಕ್ ನೌಕರರು ಕೆಲಸದಿಂದ ದೂರ ಉಳಿಯಲಿದ್ದು ಹಣಕಾಸಿನ ವಹಿವಾಟು ಕೂಡ ತಾಳ ತಪ್ಪಲಿದೆ.
ಬೆಲೆ ಏರಿಕೆ, ಖಾಸಗೀಕರಣ, ಹೊರಗುತ್ತಿಗೆ, ಕಾರ್ಮಿಕರ ಕಾನೂನು ಉಲ್ಲಂಘನೆ ಸೇರಿದಂತೆ ದೇಶದ ಹಲವು ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಶಾಲೆಗಳಿಗೆ ರಜೆ: ಶಾಲೆಗಳಿಗೆ ರಜೆ ನೀಡಬೇಕೇ, ಬೇಡವೇ ಎನ್ನುವ ತೀರ್ಮಾನದ ಹೊಣೆಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ಇನ್ನೂ ಕೆಲವು ಕಡೆ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.
ಪರೀಕ್ಷೆ ಮುಂದೂಡಿಕೆ: ಬೆಂಗಳೂರು ವಿಶ್ವವಿದ್ಯಾಲಯವು ಬುಧವಾರ ನಡೆಸಬೇಕಿದ್ದ ಸ್ನಾತಕೋತ್ತರ ಪದವಿ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ಫೆ. 22ಕ್ಕೆ ಮುಂದೂಡಿದೆ. ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನೂ ಮುಂದಕ್ಕೆ ಹಾಕಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ 22 ಸಮಾಜ ವಿಜ್ಞಾನ, 23ರಂದು ಪ್ರಥಮ ಭಾಷೆ, 25ರಂದು ವಿಜ್ಞಾನ ಮತ್ತು 26ರಂದು ತೃತೀಯ ಭಾಷೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಬೆಂಗಳೂರು ಉತ್ತರ ಶಾಲೆಗಳ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸೂಡಿ ಸುರೇಶ್ ತಿಳಿಸಿದ್ದಾರೆ.
ಬಂದೋಬಸ್ತ್: ರಾಜ್ಯದೆಲ್ಲೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. `ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯದೆಲ್ಲೆಡೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ `ಪ್ರಜಾವಾಣಿ'ಗೆ ತಿಳಿಸಿದರು.
`ಎಲ್ಲಾ ವಲಯಗಳ ಐಜಿಪಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭದ್ರತೆ ವಿಷಯವಾಗಿ ಸಲಹೆ ಸೂಚನೆಗಳನ್ನು ನೀಡಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ) ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್) ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ' ಎಂದು ಹೇಳಿದರು.
`ನಗರದಲ್ಲಿ ಸುಮಾರು 17 ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಜತೆಗೆ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ಮತ್ತು ಕೆಎಸ್ಆರ್ಪಿ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಸೂಕ್ಷ್ಮ ಸ್ಥಳಗಳಲ್ಲಿ ಸಿಬ್ಬಂದಿ ಮಫ್ತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ' ಎಂದು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್ಕುಮಾರ್ ಮಾಹಿತಿ ನೀಡಿದ್ದಾರೆ.
ಬಂದ್ನ ಭಾಗವಾಗಿ ನಗರದ ವಿವಿಧೆಡೆ ನಡೆಯುವ ಧರಣಿ ಹಾಗೂ ಪ್ರತಿಭಟನಾ ರ್ಯಾಲಿಗಳನ್ನು ಸಿಬ್ಬಂದಿ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲಿದ್ದಾರೆ. ಬಂದ್ ವೇಳೆ ಶಾಂತಿಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಡಿಸಿಪಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಂಜೆ ವಿಶೇಷ ಸಭೆ ನಡೆಸಿ, ನಗರದಲ್ಲಿ ಕೈಗೊಳ್ಳಲಾಗಿರುವ ಭದ್ರತಾ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಸೆಂಟರ್ (ಎಐಯುಟಿಯುಸಿ), ಭಾರತೀಯ ಮಜ್ದೂರ್ ಸಂಘ (ಬಿಎಂಎಸ್), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ.
ನಡೆಯಲಿದೆ ವಿಟಿಯು ಪರೀಕ್ಷೆ
ಕಾರ್ಮಿಕ ಸಂಘಟನೆಗಳು ಫೆ. 20 ಹಾಗೂ 21ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಕುಲಸಚಿವ (ಮೌಲ್ಯಮಾಪನ) ಶೇಖರಪ್ಪ ತಿಳಿಸಿದ್ದಾರೆ.
ಫೆ. 20ರಂದು ಎಂಬಿಎ, ಎಮ್ಟೆಕ್ ಹಾಗೂ ಎಂಸಿಎ ಪರೀಕ್ಷೆಗಳು ಈ ಮೊದಲು ನಿಗದಿಪಡಿಸಿದಂತೆ ನಡೆಯಲಿವೆ. ಯಾವುದೇ ಪರೀಕ್ಷೆಯನ್ನು ಮುಂದೂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
No comments:
Post a Comment